2024 ನೇ ಸಾಲಿನ ದ. ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಅವರಿಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮವು ಶನಿವಾರ ಎಕ್ಸಲೆಂಟ್ ನ ರಾಜ ಸಭಾಂಗಣದಲ್ಲಿ ನಡೆಯಿತು.
ಕಾರ್ಕಳ ವರ್ಧಮಾನ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿರುವ ಶಶಿಕಲಾ ಹೆಗ್ಡೆ ಅಭಿನಂದನಾ ಮಾತುಗಳನ್ನಾಡಿ, ಸೂಕ್ತ ಅವಕಾಶ ಸಿಕ್ಕಲ್ಲಿ ಸಾಧನೆಯ ಶಿಖರವನ್ನು ಏರಲು ಸಾಧ್ಯ ಅನ್ನುವುದಕ್ಕೆ ರಶ್ಮಿತಾ ಜೈನ್ ಅವರೇ ಸಾಕ್ಷಿ ಎಂದರು.
ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಭಾರತೀಯ ಜೈನ್ ಮಿಲನ್ ನ ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ಡಿ. ಅನಿತಾ ಸುರೇಂದ್ರ ಕುಮಾರ್ ಅವರು ಎಕ್ಸಲೆಂಟ್ ಸಂಸ್ಥೆಯ ಸಿಬ್ಬಂದಿಗಳು ರಶ್ಮಿತಾ ಜೈನ್ ಕುರಿತು ರಚಿಸಿದ ಕವನ ಮತ್ತು ಲೇಖನಗಳ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿ, ಯಶಸ್ಸು ಶ್ರಮವನ್ನು ಬೇಡುತ್ತದೆ. ಶಿಸ್ತು, ಸರಳತೆ, ಕರ್ತವ್ಯಪ್ರಜ್ಞೆ, ಗುರುವಿನ ಮಾರ್ಗದರ್ಶನದ ಮೂಲಕವಷ್ಟೇ ಯಶಸ್ಸಿನ ಮೆಟ್ಟಿಲುಗಳನ್ನು ಏರಲು ಸಾಧ್ಯ. ಈ ನಿಟ್ಟಿನಲ್ಲಿ ರಶ್ಮಿತಾ ಜೈನ್ ಅವರ ಸಾಧನೆ ಬೇರೆಯವರಿಗೆ ಪ್ರೇರಣೆ. ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದು ಪ್ರಕೃತಿಗೆ ಹತ್ತಿರವಾಗಿ ವಿದ್ಯಾರ್ಥಿಗಳಿಗೆ ಮಾದರಿ ವ್ಯಕ್ತಿಯಾಗಿ ರಶ್ಮಿತಾ ಜೈನ್ ಅವರು ವಿಶ್ರಾಂತಿಯಿಲ್ಲದೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ವಿದ್ಯೆ ಕದಿಯಲಾಗದ ಆಸ್ತಿ. ಈ ನಿಟ್ಟಿನಲ್ಲಿ ವಿದ್ಯಾದಾನ ಅತ್ಯಂತ ಶ್ರೇಷ್ಠವಾದದ್ದು. ವಿದ್ಯಾ ಕ್ಷೇತ್ರದಲ್ಲಿ ಮೂಡುಬಿದಿರೆಯ ಬೆಳವಣಿಗೆ ಬಹಳ ಸಂತೋಷವನ್ನು ನೀಡಿದೆ. ರಶ್ಮಿತಾ ಜೈನ್ ಅವರ ಶಿಕ್ಷಣ ಸೇವೆ ಇನ್ನಷ್ಟು ವಿಸ್ತರಿಸಲಿ. ಎಕ್ಸಲೆಂಟ್ ವಿದ್ಯಾ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ಹಾರೈಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ರಶ್ಮಿತಾ ಜೈನ್ , ಈ ಪ್ರಶಸ್ತಿ ಸಂಸ್ಥೆಯ ಸಕಲರಿಗೂ ಸಂದ ಗೌರವ. ಶಿಕ್ಷಣ ಸೇವೆಯನ್ನು ಸಮರ್ಪಣಾ ಮನೋಭಾವದಿಂದ, ಪ್ರಾಮಾಣಿಕ ಪ್ರಯತ್ನದಿಂದ ಮಾಡುವಲ್ಲಿ ಗುರುಹಿರಿಯರ ಮಾರ್ಗದರ್ಶನ ಅಮೂಲ್ಯವಾಗಿದೆ. ಆರಂಭದ ದಿನಗಳಲ್ಲಿ ಅವಮಾನ, ಸಂಘರ್ಷಗಳನ್ನು ಎದುರಿಸುತ್ತಲೇ ಸಂಸ್ಥೆಯನ್ನು ಮತ್ತು ಬದುಕನ್ನು ಕಟ್ಟಿಕೊಳ್ಳಬೇಕಾದ ಸವಾಲು ಎದುರಿಗಿತ್ತು. ಈ ಅನುಭವವೇ ನನ್ನ ವ್ಯಕ್ತಿತ್ವವನ್ನು ರೂಪಿಸುತ್ತಾ ಹೋಯಿತು. ವಿದ್ಯಾ ಸಂಸ್ಥೆಗೆ ವಿಭಿನ್ನ ಆರ್ಥಿಕ ಹಿನ್ನೆಲೆಯುಳ್ಳ ವಿದ್ಯಾರ್ಥಿಗಳು ಬರುವಾಗ ಅವರ ಕನಸಿಗೆ ನೀರೆರೆಯುವ ಸಂಕಲ್ಪ ದೃಢವಾಗುತ್ತ ಬಂತು. ಇಂದು ಆ ವಿದ್ಯಾರ್ಥಿಗಳು ಒಳ್ಳೆಯ ಸ್ಥಾನವನ್ನು ತಲುಪಿದಾಗ ಧನ್ಯತಾ ಭಾವ ಮೂಡುತ್ತದೆ. ನೊಂದು ಬಂದ ಹೆತ್ತವರ, ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗುವಲ್ಲಿ ಸಿಗುವ ಸಂತೋಷ ಪದಗಳಲ್ಲಿ ವಿವರಿಸಲಿಕ್ಕಾಗದು. ನನ್ನ ಹೆತ್ತವರ ಆಶೀರ್ವಾದದ ಬಲದಿಂದ ಧೈರ್ಯ ಮತ್ತು ಸ್ಥೈರ್ಯ ಪಡೆದುಕೊಂಡೆ. ನನ್ನ ಬದುಕಿಗೆ ಶಿಲ್ಪಿಯ ರೂಪದಲ್ಲಿ ಒದಗಿಬಂದವರು ನನ್ನ ಪತಿ ಯುವರಾಜ ಜೈನ್ ಅವರು. ಸಂಸ್ಥೆ ಆರಂಭವಾದಾಗಿನಿಂದ ನಮ್ಮ ಜೊತೆಯಲ್ಲಿರುವ ಸಿಬ್ಬಂದಿಗಳು, ಹೆತ್ತವರು, ವಿದ್ಯಾರ್ಥಿಗಳು ಮತ್ತು ಸಮಾಜದ ಪ್ರೀತಿಗೆ ನಾನು ಚಿರಋಣಿ ಎಂದು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿರುವ ಯುವರಾಜ ಜೈನ್ ಮಾತನಾಡುತ್ತಾ ಗುರುಹಿರಿಯರ ಬೆಂಬಲ ಒಳ್ಳೆಯ ಯೋಜನೆಗೆ ಮತ್ತು ಸಾಧನೆಗೆ ರಹದಾರಿಯಾಗಿದೆ. ರಶ್ಮಿತಾ ಜೈನ್ ಅವರು ಈ ವಿದ್ಯಾ ಸಂಸ್ಥೆಯನ್ನು ಕಟ್ಟಿದಾಗಿನಿಂದ ಪಕ್ಕದಲ್ಲಿ ನಿಂತು ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಿದ್ದಾರೆ. ಮನೆ ಬಿಟ್ಟು ವಸತಿನಿಲಯದಲ್ಲಿದ್ದು ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅಮ್ಮನ ಕೊರತೆ ಕಾಡದಂತೆ ಅಮ್ಮನ ಪ್ರೀತಿಯನ್ನು ತೋರುವ ಮಮತೆಯ ಪ್ರತಿರೂಪವಾಗಿದ್ದಾರೆ. ರಶ್ಮಿತಾ ಇರುವುದರಲ್ಲಿ ತೃಪ್ತಿ ಪಡುವ ವ್ಯಕ್ತಿತ್ವದವರು. ನಿರೀಕ್ಷೆಗಳಿಲ್ಲದೆ ಕರ್ತವ್ಯ ಬುದ್ಧಿಯಿಂದ ಕೆಲಸ ಮಾಡುವ ಮನೋಭಾವ್ ಅವರದ್ದು. ಅವರು ಸವಾಲುಗಳನ್ನು ಸಮಾನವಾಗಿ ಸ್ವೀಕರಿಸಿ ಮುನ್ನಡೆದ ರೀತಿ ಅನನ್ಯ. ತನಗೋಸ್ಕರ ಏನನ್ನೂ ಬಯಸದೆ ಎಲ್ಲರ ಅಭ್ಯುದಯ ಬಯಸುವ ಮಾತೃಸ್ವರೂಪಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ ಛಲ ಮತ್ತು ಹಠ ಯಶಸ್ಸಿನ ಸೂತ್ರ. ರಶ್ಮಿತಾ ಜೈನ್ ಅವರು ಪತಿ ಯುವರಾಜ ಜೈನ್ ಜೊತೆಗೂಡಿ ಎಕ್ಸಲೆಂಟ್ ಸಂಸ್ಥೆಯ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ಸಲ್ಲಿಸುತ್ತಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಅವರ ಶ್ರಮಕ್ಕೆ ಸಂದ ಗೌರವ ಮತ್ತು ಅವರ ಕುಟುಂಬಕ್ಕೂ ಸಮಾಜಕ್ಕೂ ಸಿಕ್ಕ ಸಮ್ಮಾನ. ಪ್ರೀತಿ ಮತ್ತು ನಿಷ್ಠುರತೆ ಎಂಬ ಯಶಸ್ಸಿನ ಎರಡು ಮುಖಗಳ ಮೂಲಕ ರಶ್ಮಿತಾ ಯುವರಾಜ ದಂಪತಿಗಳು ಯುವ ಜನತೆಯನ್ನು ಸನ್ಮಾರ್ಗದ ಕಡೆಗೆ ಕರೆದೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದರು.
ಶಿಕ್ಷಕ ಭಾಸ್ಕರ್ ನೆಲ್ಯಾಡಿ ರಚಿಸಿರುವ ಗೀತೆಯನ್ನು ಹಾಡುವುದರ ಮೂಲಕ ಸಂಸ್ಥೆಯ ವಿದ್ಯಾರ್ಥಿಗಳು ಗೀತ ನಮನವನ್ನು ಸಲ್ಲಿಸಿದರು. ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಜಯಶ್ರೀ ಅಮರನಾಥ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆಡಳಿತ ನಿರ್ದೇಶಕ ಡಾ. ಬಿ.ಪಿ. ಸಂಪತ್ ಕುಮಾರ್ ಸ್ವಾಗತಿಸಿದರು. ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಶಿವಪ್ರಸಾದ ಭಟ್ ಸನ್ಮಾನ ಪತ್ರವನ್ನು ವಾಚಿಸಿದರು. ಎಕ್ಸಲೆಂಟ್ ಸಿಬಿಎಸ್ಸಿ ಶಾಲೆಯ ಪ್ರಾಂಶುಪಾಲ ಸುರೇಶ್ ದೇವಾಡಿಗ ವಂದಿಸಿದರು. ಡಾ ವಾದಿರಾಜ ಕಲ್ಲೂರಾಯ ಮತ್ತು ಜಯಶೀಲ ಕಾರ್ಯಕ್ರಮ ನಿರೂಪಿಸಿದರು.
ತಮ್ಮ ಸೇವೆಗೆ ಸಂದ ಪ್ರಶಸ್ತಿಯ ಬಗ್ಗೆ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ರಶ್ಮಿತಾ ಜೈನ್ ಅವರ ಅನಿಸಿಕೆ..
https://www.instagram.com/p/DC-wtKIP9kS/?igsh=Z2Zicmw2d2MwOWNm