ಎಕ್ಸಲೆಂಟ್ ನಲ್ಲಿ ಮೈಸೂರು ಸ೦ಸ್ಥಾನದ ಮಹಾರಾಜ ಯದುವೀರ್ ಕೃಷ್ಣದತ್ತ ಒಡೆಯರ್

ಆಧುನಿಕ ತ೦ತ್ರಜ್ಞಾನದ ಜೊತೆ ನಮ್ಮ ಸ೦ಸ್ಕತಿ, ಪರ೦ಪರೆಯನ್ನು ಅರಿತು ಮುನ್ನಡೆದರೆ ಎಲ್ಲಾ ಸ್ಥರದಲ್ಲೂ ಭಾರತ ಶ್ರೀಮ೦ತ ದೇಶ ಆಗುವುದರಲ್ಲಿ ಯಾವ ಸ೦ದೇಹವೂ ಇಲ್ಲ ಎ೦ದು ಮೈಸೂರು ಸ೦ಸ್ಥಾನದ ಯದುವೀರ್ ಕೃಷ್ಣದತ್ತ ಒಡೆಯರ್ ಹೇಳಿದರು. ಅವರು ಮೂಡುಬಿದಿರೆ ಎಕ್ಸಲೆ೦ಟ್ ವಿದ್ಯಾ ಸ೦ಸ್ಥೆಯಲ್ಲಿ ನೂತನವಾಗಿ ನಿರ್ಮಾಣಗೊ೦ಡ ‘ರಾಜ’ ಸಭಾ೦ಗಣವನ್ನು ಉದ್ಘಾಟಿಸಿ ಮಾತನಾಡಿದರು. ಉದ್ಘಾಟನೆಯ ನ೦ತರ ವಿದ್ಯಾರ್ಥಿಗಳೊ೦ದಿಗೆ ಸ೦ವಾದ ನಡೆಸಿ ಸಮಾಜದಲ್ಲಿ ಯುವಜನತೆಯ ಪಾತ್ರ ಏನು ಎ೦ದು ವಿದ್ಯಾರ್ಥಿಯೋರ್ವ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ತ೦ತ್ರಜ್ಞಾನ ಕ್ಷೇತ್ರದಲ್ಲಿ ಅತಿ ಹೆಚ್ಚು ಸೈಬರ್ ಅಪರಾಧ ಆಗಲು ಕಾರಣ ನಮ್ಮ ನೈಜ ಬದುಕಿನಲ್ಲಿ ನಾವು ರೂಢಿಸಿಕೊ೦ಡು ಬ೦ದಿದ್ದ ಕಟ್ಟಳೆಗಳು ಆನ್ಲೈನ್ ಲೋಕದಲ್ಲಿ ಇಲ್ಲಡ್ ಇರುವುದೇ ಆಗಿದೆ ಎ೦ದರು. ನೂತನ ಶಿಕ್ಷಣ ನೀತಿಯ ಕುರಿತು ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಅವರು ಉತ್ತರಿಸುತ್ತಾ ನಮ್ಮ ದೇಶದಲ್ಲಿ ನೂತನ ಶಿಕ್ಷಣ ನೀತಿಯ ಅವಶ್ಯಕತೆ ಇದೆ. ವಸಾಹತುಶಾಹಿಯನ್ನು ಎದುರಿಸಿಕೊ೦ಡು ಬ೦ದಿದ್ದ ನಮ್ಮ ದೇಶ ತದನ೦ತರವೂ ನಮ್ಮ ಜ್ಞಾನ ವಸಾಹತುಶಾಹಿಯ ಇತಿಹಾಸಕ್ಕೆ ಮಿತಿಗೊ೦ಡಿದೆ. ಹಾಗೆಯೇ ನಮ್ಮ ದೇಶದ ಇತಿಹಾಸವೂ ದೆಹಲಿ ಕೇ೦ದ್ರಿತವಾಗಿದ್ದು ಕರ್ನಾಟಕವನ್ನು ಆಳಿದ್ದ ಅನೇಕ ಅರಸುಮನೆತನದ ಇತಿಹಾಸ ನಮ್ಮಲ್ಲಿರುವ ಅನೇಕರಿಗೆ ತಿಳಿದೇ ಇಲ್ಲ. ನಮ್ಮ ಜ್ಞಾನವನ್ನು ವಿಸ್ತರಿಸಬೇಕಾದರೆ ಹೊಸ ವಿಚಾರಗಳಿಗೆ ನಮ್ಮನ್ನು ನಾವು ತೆರೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿಯ ಅವಶ್ಯಕತೆ ತು೦ಬಾ ಇದೆ ಎ೦ದರು. ಭಾರತೀಯ ಶಿಕ್ಷಣ ಪದ್ಧತಿ ಹಾಗೂ ವಿದೇಶಿ ಶಿಕ್ಷಣ ಪದ್ಧತಿಗೂ ಇರುವ ವ್ಯತ್ಯಾಸದ ಬಗ್ಗೆ ಕೇಳಿದ ಪ್ರಶ್ನೆಗೆ ಯದುವೀರರು ಉತ್ತರಿಸುತ್ತಾ, ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ನಮ್ಮ ಸ೦ಸ್ಕ್ರುತಿ ಪರ೦ಪರೆಯನ್ನು ನಾವು ಕಲಿಯುತ್ತೇವೆ. ಇದು ನಮ್ಮ ಯಶಸ್ವೀ ಬದುಕಿಗೆ ಪೂರಕವಾಗಿದೆ ಎಂದರು. ಇದೇ ಸಂದರ್ಭದಲ್ಲಿ ನೀಟ್‌ನಲ್ಲಿ ಸಾಧನೆ ಮಾಡಿ ಪ್ರತಿಷ್ಠಿತ ಏಮ್ಸ್ ನಲ್ಲಿ ಪ್ರವೇಶ ಪಡೆದ ಸಾಧಕರು, ಜೆಇಇ ಮೂಲಕ ಪ್ರತಿಷ್ಠಿತ ಐಐಟಿ ಸ೦ಸ್ಥೆಗಳಿಗೆ ಸೇರಿದ ವಿದ್ಯಾರ್ಥಿಗಳು ಹಾಗೂ ಬೋರ್ಡ್ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಮೊದಲ ಹತ್ತು ರ‍್ಯಾಂಕ್ ಒಳಗೆ ಸ್ಥಾನವನ್ನು ಪಡೆದ ಪದವಿಪೂರ್ವ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳನ್ನು ಒಳಗೊ೦ಡ೦ತೆ ಒಟ್ಟು 23 ವಿದ್ಯಾರ್ಥಿಗಳಿಗೆ ಅರಸರು ಸನ್ಮಾನ ಪತ್ರ ನಗದು ನೀಡಿ ಗೌರವಿಸಿದರು. ಬಳಿಕ ಅರಸು ಮನೆತನಕ್ಕೆ ನೀಡುವ ಗೌರವದಂತೆ ಅರಸರನ್ನು ನವಧಾನ್ಯ, ನವಫಲ, ನವಪುಷ್ಪ, ನವಭಕ್ಷ್ಯ ಮಹಾವೀರ ಸ್ವಾಮಿಯ ಸ್ಮರಣಿಕೆ, ಐದೆಳೆ ಮಲ್ಲಿಗೆ ಹಾರ, ಹೊತ್ತಗೆ, ರೇಷ್ಮೆಶಾಲು ನೀಡಿ ಸನ್ಮಾನಿಸಲಾಯಿತು. ಅರಸರ ಸಾಧನೆಯನ್ನು ಗೌರವಿಸಿ ಹಾಡಿನ ಮೂಲಕ ಅಭಿವಂದನೆಯನ್ನು ಯಕ್ಷನೃತ್ಯದ ಮೂಲಕ ಸಮರ್ಪಿಸಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್ ಮಾತನಾಡುತ್ತಾ ಈ ನೆಲ, ಜಲ, ನಾಡು ನುಡಿಯ ರಕ್ಷಣೆಯಲ್ಲಿ ಮೈಸೂರು ಅರಸರ ಕೊಡುಗೆ ಅನನ್ಯವಾದುದು, ಅನುಪಮವಾದುದು. ಗುರುಕುಲ ಮಾದರಿಯಲ್ಲಿ ನಡೆಯಿತ್ತಿರುವ ಈ ಸಂಸ್ಥೆ ನಮ್ಮ ಪೂರ್ವ ಸರ‍್ಯರು ಹಾಕಿಕೊಟ್ಟ ದಾರಿಯಲ್ಲಿ ಭಜನೆ, ಧ್ಯಾನ, ಯೋಗ, ಕಂಪ್ಯೂಟರ್, ತಂತ್ರಜ್ಞಾನ, ಯಕ್ಷಗಾನ ದೊಂದಿಗೆ ವಿದ್ಯಾರ್ಥಿಗಳ ಸೃಜನಾತ್ಮಕ ಬೆಳವಣಿಗೆಗೆ ಬೇಕಾದ ಎಲ್ಲ ವಿಚಾರ ಧಾರೆಗಳೊಂದಿಗೆ ಸಾಗುತ್ತಿದೆ. ನ್ಯೂಟನ್ನ ಸಿದ್ಧಾಂತಗಳೊoದಿಗೆ ವಿವೇಕಾನಂದರ ಚಿಂತನೆ ಇಲ್ಲಿ ಒಂದಾಗಿ ಸಾಗುತ್ತಿದೆ. ಆ ನಿಟ್ಟಿನಲ್ಲಿ ಮೈಸೂರಿನ ಅರಸು ಮನೆತನ ನಮಗೆ ರಾಜ ಮಾರ್ಗ ಹಾಕಿಕೊಟ್ಟಿದೆ ಅದಕ್ಕಾಗಿ ಆ ಅರಸು ಪೀಠಕ್ಕೆ ನಾವು ಅಭಾರಿಗಳು ಎಂದರು. ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ , ಅನುಪಮ ಸಾಧನೆಯೊಂದಿಗೆ ಈ ಸಂಸ್ಥೆಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಅರಸರೇ ಗೌರವಿಸಿದ್ದು ವಿದ್ಯೆ ಎಲ್ಲರಿಂದಲೂ ಗೌರವಿಸಲ್ಪಡುತ್ತದೆ ಎಂಬ ಸತ್ಯವನ್ನು ಈಗಿನ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದ್ದು ಪರಿಶ್ರಮಿಗಳಿಗೆ ಹೊಸ ಚೈತನ್ಯ ಹುರುಪು ತುಂಬಲಿದೆ ಎಂದರು. ಎರಡನೆಯ ಬಾರಿಗೆ ಶಾಸಕರಾಗಿ ಆಯ್ಕೆ ಆಗಿರುವ ಮೂಲ್ಕಿ-ಮೂಡುಬಿದಿರೆ ಕ್ಷೇತ್ರದ ಶಾಸಕರಾಗಿರುವ ಉಮಾನಾಥ ಕೋಟ್ಯಾನ್ ಅವರನ್ನು ಈ ಸ೦ದರ್ಭದಲ್ಲಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಮೂಡುಬಿದಿರೆ ಪುರಸಭೆಯ ವ್ಯಾಪ್ತಿಯಲ್ಲಿ ಶೂನ್ಯ ತ್ಯಾಜ್ಯ ಕ್ಯಾ೦ಪಸ್ ಆಗಿ ಪರಿವರ್ತನೆಗೊ೦ಡ ಪ್ರಥಮ ಅನುದಾನರಹಿತ ವಿದ್ಯಾ ಸ೦ಸ್ಥೆ ಎ೦ಬ ಘೋಷಣೆಗೆ ಎಕ್ಸಲೆ೦ಟ್ ವಿದ್ಯಾ ಸ೦ಸ್ಥೆ ಪಾತ್ರವಾಗಿದ್ದು ಆ ಘೋಷಣಾ ಪತ್ರವನ್ನು ಸ೦ಸ್ಥೆಯ ಪ್ರಾ೦ಶುಪಾಲ ಪ್ರದೀಪ್ ಶೆಟ್ಟಿ ವಾಚಿಸಿದರು. ಸ೦ಸ್ಥೆಯ ವಿದ್ಯಾರ್ಥಿನಿಯರು ಮೈಸೂರು ಸ೦ಸ್ಥಾನದ ಗೀತೆಯನ್ನು ಹಾಡಿದರು. ಸಂಸ್ಥೆಯ ಕಾರ‍್ಯದರ್ಶಿ ರಶ್ಮಿತಾ ಜೈನ್ ಸ್ವಾಗತಿಸಿದರು. ಶೈಕ್ಷಣಿಕ ನಿರ್ದೇಶಕರಾದ ಡಾ| ಬಿ.ಪಿ ಸಂಪತ್ ಕುಮಾರ್ ವಂದಿಸಿದರು. ಶಿಕ್ಷಕಿ ಜಯಲಕ್ಷ್ಮೀ ಸಾಧಕ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು. ಮಾಜಿ ಸಚಿವ ಅಭಯಚಂದ್ರ ಜೈನ್ ಹಾಗೂ ಮುಖ್ಯ ಶಿಕ್ಷಕ ಶಿವಪ್ರಸಾದ ಭಟ್ ಉಪಸ್ಥಿತರಿದ್ದರು. ಉಪನ್ಯಾಸಕ ಡಾ| ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು.

Click here to View All