ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಕಾರ್‍ಯದರ್ಶಿಗಳಾದ ಶ್ರೀಮತಿ ರಶ್ಮಿತಾ ಜೈನ್ ಅವರಿಗೆ 2024 ನೆಯ ಸಾಲಿನ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಾಪ್ತವಾಗಿದೆ. ಸಾಮಾಜಿಕ, ಸಾಂಸ್ಕೃತಿಕ, ಪರಿಸರ ಹಾಗೂ ಮುಖ್ಯವಾಗಿ ಶಿಕ್ಷಣ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಅನುಪಮ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಿ ಗೌರವಿಸಿಲಾಗಿದೆ.
ನವೆಂಬರ್ ಒಂದರಂದು ಕರ್ನಾಟಕ ರಾಜ್ಯೋತ್ಸವದ ಶುಭಾವಸರದಲ್ಲಿ ಮಂಗಳೂರಿನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಈ ಪುರಸ್ಕಾರವನ್ನು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಸಂಸದರಾದ ಬ್ರಿಜೇಶ್ ಚೌಟ ಹಾಗೂ ಶಾಸಕರಾದ ವೇದವ್ಯಾಸ್ ಕಾಮತ್ ಹಾಗೂ ಡಾ.ಭರತ್ ಶೆಟ್ಟಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಶ್ರೀಮತಿ ರಶ್ಮಿತಾ ಜೈನ್ ಅವರು ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿ ತಮ್ಮ ಪತಿ ಯುವರಾಜ್ ಜೈನ್ ಅವರ ಜೊತೆಗೂಡಿ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಮುನ್ನಡೆಸಿಕೊಂಡು ಬಂದಿದ್ದಾರೆ. ಈ ಸಂಸ್ಥೆಯಲ್ಲಿ ಇಂದು ಎಲ್.ಕೆ.ಜಿ.ಯಿಂದ ಪಿ.ಯು.ಸಿ.ವರೆಗೆ ಒಟ್ಟು 3000ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಸಂಸ್ಥೆಯ ಮೂಲಕ ಈವರೆಗೆ ಹೊರಹೋದ ಸಾವಿರಾರು ವಿದ್ಯಾರ್ಥಿಗಳು ವೈದ್ಯರಾಗಿ, ಇಂಜಿನಿಯರ್‌ಗಳಾಗಿ ವಿಜ್ಞಾನಿಗಳಾಗಿ, ಅಧ್ಯಾಪಕರಾಗಿ, ಆರ್ಥಿಕ ವಲಯದ ಅನೇಕ ಸಂಸ್ಥೆಗಳಲ್ಲಿ ಉದ್ಯೋಗಸ್ಥರಾಗಿ ಯೋಗ್ಯ ಪ್ರಜೆಗಳಾಗಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ.