ಪೋಲಿಸ್ ತುಂಬಾ ಪವಿತ್ರವಾದ ಕೆಲಸ, ಎಲ್ಲಿ ಮನುಷ್ಯರಿರುತ್ತಾರೆಯೋ ಅಲ್ಲಿ ಗಲಾಟೆ, ಗಲಭೆಗಳಿರುತ್ತವೆ. ಆದರೆ ಅವೆಲ್ಲವನ್ನು ಹಿಡಿತಕ್ಕೆ ತಂದು ಸಾರ್ವಜನಿಕರಲ್ಲಿ ಶಾಂತಿಯ ಬದುಕು ನಿರ್ಮಿಸುವುದು ನಮ್ಮ ಕರ್ತವ್ಯವಾಗಿದೆ. ಎಲ್ಲರಿಗೂ ಸಮಾನವಾದ ನ್ಯಾಯ ಒದಗಿಸುವುದೇ ಪೋಲಿಸ್ ಇಲಾಖೆಯ ಮುಖ್ಯ ಧ್ಯೇಯ ಎಂದು ಮೂಡುಬಿದಿರೆಯ ಪೋಲಿಸ್ ವೃತ್ತ ನಿರೀಕ್ಷಕರಾದ ಸಂದೇಶ್ ಪಿ ಜಿ ಯವರು ಅಭಿಪ್ರಾಯಪಟ್ಟರು. ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಪೋಲಿಸ್ ಸಹಕಾರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಅವರು ಸಮಾಜದಲ್ಲಿ ನಡೆಯುವ ಅನ್ಯಾಯ ಅಕ್ರಮಗಳು, ಕಾನೂನು ಬಾಹಿರ ಚಟುವಟಿಕೆಗಳ ವಿರುದ್ದ ಹೋರಾಡಿ ಶಾಂತಿ ಸುವ್ಯವಸ್ಥೆ ಕಾಪಾಡುವುದು, ಜನಗಳ ಮಧ್ಯೆ ಉತ್ತಮ ಭಾಂಧವ್ಯ ಬೆಳೆಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.ಸಾರ್ವಜನಿಕ ಸುವ್ಯವಸ್ಥೆ ಹಾಗೂ ಕಾನೂನು ಸುವ್ಯವಸ್ಥೆಯಲ್ಲಿ ಹೊಸ ಭವಿಷ್ಯವನ್ನು ಬರೆದು ದಕ್ಷ ಪ್ರಾಮಾಣಿಕ ಅಧಿಕಾರಿಯಾಗಿ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳ ಚಿನ್ನದ ಪದಕ ಗೌರವಕ್ಕೆ ಪಾತ್ರರಾಗಿ ಮೂಡುಬಿದಿರೆಗೆ ಹೆಮ್ಮೆ ತಂದ ಇವರನ್ನು ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಸನ್ಮಾನಿಸಿ ಗೌರವಿಸಿದರು.