ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (KRMS) ಮಂಗಳೂರು ವಿಭಾಗ ಹಾಗೂ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಜಂಟಿ ಆಶ್ರಯದಲ್ಲಿ, "ಅಬ್ಬಕ್ಕ @500" ಪ್ರೇರಣಾದಾಯಿ 100 ಉಪನ್ಯಾಸಗಳ ಸರಣಿಯ 99ನೇ ಕಾರ್ಯಕ್ರಮವು ಸೋಮವಾರ ಕಲ್ಲಬೆಟ್ಟುವಿನ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮವನ್ನು ಅಬ್ಬಕ್ಕ ವಂಶಸ್ಥರಾದ ಧರ್ಮಸ್ಥಳದ ಅನಿತಾ ಸುರೇಂದ್ರ ಕುಮಾರ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, "ರಾಣಿ ಅಬ್ಬಕ್ಕರ ಶೌರ್ಯ, ಧೈರ್ಯ ಮತ್ತು ಸ್ವಾಭಿಮಾನ ಇಂದಿನ ಯುವ ಪೀಳಿಗೆಗೆ ದಾರಿದೀಪವಾಗಲಿ. ಇತಿಹಾಸದ ಇಂತಹ ವೀರಗಾಥೆಗಳಿಂದ ಸ್ಫೂರ್ತಿ ಪಡೆದು ವಿದ್ಯಾರ್ಥಿಗಳು ದೇಶಪ್ರೇಮದೊಂದಿಗೆ ಸಾರ್ಥಕ ಬದುಕು ರೂಪಿಸಿಕೊಳ್ಳಬೇಕು," ಎಂದು ಕರೆ ನೀಡಿದರು.
ವಿದ್ವಾಂಸ ರವಿ ಅಲೆವೂರಾಯ ಅವರು ಮುಖ್ಯ ಉಪನ್ಯಾಸ ನೀಡಿ, ರಾಣಿ ಅಬ್ಬಕ್ಕ ವಿದೇಶಿ ಆಕ್ರಮಣಕಾರರ ವಿರುದ್ಧ ನಡೆಸಿದ ಕೆಚ್ಚೆದೆಯ ಹೋರಾಟ, ಅವರ ನಾಯಕತ್ವದ ಗುಣಗಳು ಮತ್ತು ಅವರ ಜೀವನ ನಮಗೆ ಕಲಿಸುವ ದೇಶಭಕ್ತಿಯ ಮೌಲ್ಯಗಳ ಬಗ್ಗೆ ವಿಸ್ತಾರವಾಗಿ ವಿವರಿಸಿದರು.
ಅಬ್ಬಕ್ಕ ಪುರಸ್ಕಾರ:
'ರಾಣಿ ಅಬ್ಬಕ್ಕ ಪುರಸ್ಕಾರ'ವನ್ನು ಎಕ್ಸಲೆಂಟ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಅವರಿಗೆ ಪ್ರದಾನ ಮಾಡಲಾಯಿತು.
ರಾಣಿ ಅಬ್ಬಕ್ಕ ಅವರ ಇತಿಹಾಸದ ಕುರಿತು ವಿಶೇಷ ಸೇವೆ ಸಲ್ಲಿಸಿದ ಗಣ್ಯರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು, ಡಾ. ಎಂ. ತುಕಾರಾಂ ಪೂಜಾರಿ (ಅಧ್ಯಕ್ಷರು, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ, ಬಂಟ್ವಾಳ), ದಿನಕರ್ ಉಳ್ಳಾಲ್ (ಅಧ್ಯಕ್ಷರು, ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ, ಉಳ್ಳಾಲ), ಭಾಸ್ಕರ್ ರೈ ಕುಕ್ಕುವಳ್ಳಿ (ಕಾರ್ಯಾಧ್ಯಕ್ಷರು, ಯಕ್ಷಾಂಗಣ ಮಂಗಳೂರು), ಅಮರಕೋಟೆ ಸಂಸ್ಥಾಪಕರು (ಜವನೆರ್ ಬೆದ್ರ ಫೌಂಡೇಶನ್) ಹಾಗೂ ಡಾ. ಯು.ಕೆ. ಸಸಿಹಿತ್ಲು (ಸಂಶೋಧಕರು ಹಾಗೂ ಸಾಹಿತಿಗಳು, ಉಡುಪಿ) ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಕಾಶ್ ಮಲ್ಪೆ ನಿರ್ಮಾಣದ ರಾಣಿ ಅಬ್ಬಕ್ಕ ಕುರಿತಾದ AI (ಕೃತಕ ಬುದ್ಧಿಮತ್ತೆ) ಮಾದರಿಯ ಸಾಕ್ಷ್ಯಚಿತ್ರ ಪ್ರದರ್ಶನಗೊಂಡು ಎಲ್ಲರ ಗಮನ ಸೆಳೆಯಿತು. ಇದರೊಂದಿಗೆ ಕೆ. ಸುಧಾಕರ್ ಗಂಗೊಳ್ಳಿ ಅವರ ಸಂಗ್ರಹದ ಅಪರೂಪದ 25,000 ಅಂಚೆಚೀಟಿಗಳ ಪ್ರದರ್ಶನವೂ ನಡೆಯಿತು.
ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಅಧ್ಯಕ್ಷತೆ ವಹಿಸಿದ್ದರು. KRMS ರಾಜ್ಯ ಜಂಟಿ ಪ್ರಧಾನ ಕಾರ್ಯದರ್ಶಿ ಡಾ. ಮಾಧವ ಎಂ.ಕೆ. ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಸಂಘದ ಮಮತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು ಮತ್ತು ಉಪಮುಖ್ಯೋಪಾಧ್ಯಾಯರಾದ ಜಯಶೀಲ ವಂದಿಸಿದರು.